ಮಿಡ್ಲ್‍ಟನ್, ತಾಮಸ್
1580-1627. ಇಂಗ್ಲೆಂಡಿನ ನಾಟಕಕಾರ. ತನ್ನ ನಾಟಕಗಳ ಹಾಸ್ಯೋತ್ಯಾಹ ಮತ್ತು ಸೂಕ್ಷ್ಮ ವ್ಯಂಗ್ಯಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದವ. ಮಾನವ ಸ್ವಭಾವವನ್ನು ಭೀತಿ, ಭಾವುಕತೆ ಅಥವಾ ಪೂರ್ವಾಗ್ರಹಗಳಿಲ್ಲದೆ ಗಮನಿಸಬಲ್ಲ ಶಕ್ತಿ ಇವನಿಗಿತ್ತು. ಲಂಡನ್ನಿನ ಓಲ್ಡ್‍ಜ್ಯೂರಿಯ ಸೇಂಟ್ ಲಾರೆನ್ಸ್ ಚರ್ಚಿನಲ್ಲಿ 18 ಏಪ್ರಿಲ್ 1580ರಂದು ಇವನ ದೀಕ್ಷೆಸ್ನಾನ ನಡೆಯಿತು. ಸು. 1600ರ ವೇಳೆಗಾಗಲೇ ಈತ ಆಕ್ಸ್‍ಫರ್ಡ್‍ನ ಕ್ವೀನ್ಸ್ ಕಾಲೇಜಿನಲ್ಲಿ ಎರಡು ವರ್ಷಗಳ ವಿದ್ಯಾಭ್ಯಾಸ ಮುಗಿಸಿದ್ದ. ದಿ ವಿಸ್ಡಮ್ ಆಫ್ ಸಾಲೋಮನ್ ಪ್ಯಾರಾಫ್ರೇಸ್ಡ (1597), ಸಿಕ್ಸ್ ಸ್ನಾರ್ಲಿಂಗ್ ಸಟೈಸ (1599), ದಿ ಘೋಸ್ಟ ಆಫ್ ಲೂಕ್ರೇಸ್ (1600) ಎಂಬ ಮೂರು ಕಾವ್ಯಗಳನ್ನು ಪ್ರಕಟಿಸಿದ್ದ. ಗ್ರೇಸ್‍ಇನ್‍ನಲ್ಲಿ ಕೂಡ ವಿದ್ಯಾಭ್ಯಾಸ ಮಾಡಿದ್ದರ ಫಲವಾಗಿ ನ್ಯಾಯಶಾಸ್ತ್ರದ ಜ್ಞಾನವನ್ನು ಈತ ಪಡೆದಿದ್ದ. ನಾಟಕ ಬರೆಯಲು ಕಲಿತದ್ದು ತಾಮಸ್ ಡೆಕ್ಕರ್ ಜಾನ್, ವೆಬ್‍ಸ್ಟರ್ ಮೊದಲಾದ ಲೇಖಕರ ಸಹಯೋಗದಿಂದ. ಡ್ರೇಟನ್, ಮನ್‍ಡೇ, ರೋಲಿ ಮುಂತಾದ ಲೇಖಕರ ಜೊತೆಗೂಡಿಯೂ ಈತ ನಾಟಕಗಳನ್ನು ಬರೆದ.

	ಇವನು ಸ್ವತಂತ್ರವಾಗಿ ಬರೆದ ಮೊದಲ ನಾಟಕ ದಿ ಚೆಸ್ಟರ್ ಟ್ರಾಜಿಡಿ (1602). ಅಲ್ಲಿಂದ ಮುಂದೆ ಈತ ನಾಟಕ ಕಂಪನಿಗಳಿಗಾಗಿ ನಿಯತವಾಗಿ ಬರೆಯ ತೊಡಗಿದ. ಮೊದಲು ಬರೆಯುತ್ತಿದ್ದುದು ನಿರ್ಮಾಪಕ ಫಿಲಿಪ್ ಹೆನ್‍ಸ್ಲೋವ್‍ಗಾಗಿ. ಶೀಘ್ರದಲ್ಲೇ ಸತ್ತ್ವಪೂರ್ಣ ಹರ್ಷನಾಟಕಗಳನ್ನು ಹೇರಳವಾಗಿ ಬರೆದ. ಇವನ್ನು ಸೇಂಟ್‍ಪಾಲ್ ಮತ್ತು ಬ್ಲ್ಯಾಕ್ ಫ್ರಯರ್ಸ್‍ನ ಬಾಲನಟರು ಅಭಿನಯಿಸುತ್ತಿದ್ದರು. ಮುಂದೆ ಸ್ವಾನ್ ಮತ್ತು ಗ್ಲೋಬ್ ಮುಂತಾದ ಅನೇಕ ನಾಟಕ ಕಂಪನಿಗಳಿಗಾಗಿ ನಾಟಕಗಳನ್ನು ಬರೆದುಕೊಟ್ಟ. ಈತ ಆಗಾಗ ನಾಗರಿಕರಿಗಾಗಿ ಲಂಡನ್ ಪುರಸಭಾಧ್ಯಕ್ಷರನ್ನು ಚಿತ್ರಿಸುವ ಮತ್ತು ಇತರ ಮನರಂಜಕ ರೂಪಕಗಳನ್ನು ಬರೆಯುವ ಕೆಲಸದಲ್ಲಿ ನಿಯೋಜಿತನಾಗುತ್ತಿದ್ದ. 1620ರಲ್ಲಿ ಲಂಡನ್ ನಗರದ ಕ್ರೋನಾಲಜರ್ (ಆಯಾ ಘಟನೆಯ ಕಾಲವನ್ನು ದಾಖಲು ಮಾಡಿ ಇಡುವವನು) ಆಗಿ ನೇಮಕಗೊಂಡ. ತನ್ನ ಅಧಿಕಾರಾವಧಿಯಲ್ಲಿ ಇಂಥ ಒಂದು ದಾಖಲೆಯನ್ನು ಇವನು ರಚಿಸಿದ್ದನಾದರೂ ಅದು ಈಗ ಕಳೆದುಹೋಗಿದೆ. ನಗರದ ಸಮಾರಂಭಗಳಿಗಾಗಿ ಸ್ಥಳಚರಿತ್ರೆಗಳನ್ನೂ (ಪೇಜಂಟ್ಸ್) ಮುಖವಾಡ ನಾಟಕಗಳನ್ನೂ (ಮಾಸ್ಕ್ಸ್) ಬರೆದದ್ದುಂಟು. ಜೊತೆಗೆ ಅನೇಕ ಕಿರು ಹೊತ್ತಿಗೆಗಳನ್ನು (ಪಾಂಪ್ಲೆಟ್ಸ್) ಇವನು ಪ್ರಕಟಿಸಿದ್ದ.

	ಲಕ್ಷಣಯುಕ್ತ ಸುಖಾಂತ ನಾಟಕಗಳನ್ನು ಬರೆಯುವುದರಲ್ಲಿ ತಾಮಸ್‍ನದು ಸಿದ್ಧಹಸ್ತ. ವಿಡಂಬನೆಯಲ್ಲಿ ತೀಕ್ಷ್ಣತೆ. ಸಂಭಾಷಣೆಯಲ್ಲಿ ಚುರುಕು, ಲವಲವಿಕೆ ಇವನ ನಾಟಕಗಳಲ್ಲಿ ಕಂಡುಬರುತ್ತವೆ. ಸಮಕಾಲೀನ ನಡತೆಗಳನ್ನು ವಸ್ತುವಾಗಿಟ್ಟುಕೊಂಡು ವಿಡಂಬನಾತ್ಮಕ ಸುಖಾಂತಗಳನ್ನು ಇವನು ಬರೆದ. ವಿಲಿಯಮ್ ರೋಲಿಯ ಪ್ರಭಾವದಿಂದ ರಂಜಕ ಸುಖಾಂತಗಳನ್ನು ಬರೆದ. ತೀವ್ರ ಭಾವೋದ್ರೇಕದ ಅಂಕಗಳಲ್ಲಿ ಇವನ ದುಃಖಾಂತಗಳು ವೆಬ್‍ಸ್ಟರ್‍ನ ನಾಟಕಗಳಿಗೆ ಪ್ರತಿಸ್ಪರ್ಧಿಗಳಾಗಿ ನಿಲ್ಲುತ್ತವೆ.

	ಎ ಟ್ರಿಕ್ ಟು ಕ್ಯಾಚ್ ದಿ ಓಲ್ಡ್ ಒನ್ (1604-06), ಮೈಕೆಲ್‍ಮಸ್ ಟರ್ಮ್(1606), ದಿ ರೋರಿಂಗ್ ಗರ್ಲ್ ಆರ್ ಮೋಲ್ ಕಟ್‍ಪರ್ಸ್ (ತಾಮಸ್ ಡೆಕ್ಕರ್‍ನೊಡನೆ, 1610), ಎ ಚೇಸ್ಟ್ ಮೇಡ್ ಇನ್ ಚೀಪ್‍ಸೈಡ್ (1611)-ಇವು ಇವನ ಪ್ರಮುಖ ಹಾಸ್ಯ ನಾಟಕಗಳು. ಎ ಫೇರ್ ಕ್ವಾರಲ್ (ವಿಲಿಯಮ್ ರೋಲಿಯೊಡನೆ, 1615-17). ದಿ ಚೇಂಜಲಿಂಗ್ (ವಿಲಿಯಮ್ ರೋಲಿಯೊಡನೆ, 1622), ವುಮನ್ ಬಿವೇರ್ ವುಮನ್ (1625-27)-ಇವು ಇವನ ಮುಖ್ಯ ರುದ್ರಹರ್ಷ ಹಾಗೂ ದುರಂತ ನಾಟಕಗಳು.

	ಇವನ ರುದ್ರಹರ್ಷ ನಾಟಕಗಳ ವಸ್ತು ಪ್ರಯಾಸದಿಂದ ಸಾಧಿಸಿದ್ದು. ಆದರೂ ಅವು ನಾಟಕೀಯ ಸನ್ನಿವೇಶಗಳಲ್ಲಿ ಗಟ್ಟಿಯಾಗಿವೆ. ಎ ಫೇರ್ ಕ್ವಾರಲ್ ಅಂಥ ಒಂದು ನಾಟಕ. ಕರ್ನಲ್ ಒಬ್ಬ ಕ್ಯಾಪ್ಟನ್ ಏಜರ್ ಎಂಬಾತನ ತಾಯಿಯನ್ನು ಹೀಯಾಳಿಸಿ ಮಾತನಾಡುತ್ತಾನೆ. ಅವರಿಬ್ಬರ ನಡುವೆ ದ್ವಂದ್ವ ಯುದ್ಧ ನಡೆಯುವುದನ್ನು ತಪ್ಪಿಸುವ ಸಲುವಾಗಿ ಏಜರ್‍ನ ತಾಯಿ ಮೌನ ತಾಳುತ್ತಾಳೆ. ನೀನೊಬ್ಬ ಹೇಡಿ ಎಂದು ಏಜರ್‍ನನ್ನು ಕರ್ನಲ್ ರೇಗಿಸುತ್ತಾನೆ. ಆಗ ವಂಶದ ಘನತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಏಜರ್ ದ್ವಂದ್ವಯುದ್ಧಕ್ಕೆ ತೊಡಗುತ್ತಾನೆ. ಸ್ವಲ್ಪ ಸಮಯದ ಅನಂತರ ಇಬ್ಬರಿಗೂ ತಾವು ಮಾಡುತ್ತಿರುವುದು ತಪ್ಪೆಂದು ಅರಿವಾಗುತ್ತದೆ. ಕರ್ನಲ್ ತಾನು ಆಡಿದ ಮಾತಿಗೆ ವಿಷಾದ ವ್ಯಕ್ತ ಪಡಿಸುತ್ತಾನೆ. ತನ್ನ ಆಸ್ತಿಗೆ ಮುಂದಿನ ಹಕ್ಕುದಾರ ಕ್ಯಾಪ್ಟನ್ ಏಜರ್ ಎಂದು ಸಾರಿ ತಂಗಿಯನ್ನು ಕೊಟ್ಟು ಮದುವೆ ಮಾಡುತ್ತಾನೆ.

	ವುಮೆನ್ ಬಿವೇರ್ ವುಮೆನ್ ನ ನವಿರಾದ ಪಿತೂರಿಯು ವೆಬ್‍ಸ್ಟರ್ನ ದಿ ವೈಟ್ ಡೆವಿಲ್ ನಾಟಕವನ್ನು ನೆನಪಿಗೆ ತರುತ್ತದೆ. ಫ್ಲಾರೆನ್ಸ್‍ನ ದಳಪತಿ ಬಿಯಾಂಕ ಸೆರೆಯಾಗುವುದು ಮತ್ತು ರಕ್ತಪಾತದ ಪ್ರತೀಕಾರಗಳಲ್ಲಿ ಇವೆರಡರ ಸಾಮ್ಯವನ್ನು ಗುರುತಿಸಬಹುದು. ದಳಪತಿಯ ಯಶಸ್ಸನ್ನು ಸಂಕೇತಿಸುವ ಚೆಸ್ ಆಟದ ಅಂಕ ದುರಂತ ವ್ಯಂಗದ ಶ್ರೇಷ್ಠ ನಿದರ್ಶನ. ಇಲ್ಲಿಯ ಕಪ್ಪುಪಾತ್ರಗಳು ಯಾವಾಗಲೂ ಬಿಳಿಯ ಪಾತ್ರಗಳನ್ನು ಮರಳುಗೊಳಿಸುತ್ತ ಹೋಗಿ ಕೊನೆಗೆ ಬಿಳಿಯ ಪಾತ್ರಗಳೂ ಕಪ್ಪುಪಾತ್ರಗಳೇ ಆಗಿಬಿಡುತ್ತವೆ. ಚೇಂಜಲಿಂಗ್ ನಾಟಕದಲ್ಲಿ ಪಾತಕ ಮತ್ತು ಅದರ ಮಾನಸಿಕ ಪರಿಣಾಮಗಳ ಶಕ್ತಿಯುತ ಅಧ್ಯಯನ ಕಂಡುಬರುತ್ತದೆ. ಇದರಲ್ಲಿ ರೋಲಿ ಬರೆದ ಹರ್ಷ ಉಪಾಂಕವಿರದೇ ಹೋಗಿದ್ದರೆ ಇದು ಇನ್ನು ಉತ್ತಮ ನಾಟಕವಾಗುತ್ತಿತ್ತೆಂಬುದು ಕೆಲ ವಿಮರ್ಶಕರ ಅಭಿಪ್ರಾಯ. ಬಿಯಾಟ್ರಿಸ್-ಜೋ ಅನ್ನಾ ಎಂಬ ಚಲಗಾತಿ ಮತ್ತು ಭಾವೋದ್ರೇಕದ ಹುಡುಗಿ ಒಂದು ಕೊಲೆ ಮಾಡಿಸುವ ಮೂಲಕ ತನ್ನ ಪ್ರೇಮಿಯನ್ನು ವರಿಸಲು ದಾರಿ ಸುಗಮ ಮಾಡಿಕೊಳ್ಳುತ್ತಾಳೆ. ಆದರೆ ಕಡೆಗೆ ಆಕೆ ಆ ಕೊಲೆಗಡುಕನಿಗೇ ಅಧೀನಳಾಗಬೇಕಾದ ವಿಪರ್ಯಾಸಕ್ಕೆ ಒಳಗಾಗುತ್ತಾಳೆ. ಇದು ಈ ನಾಟಕದ ವಸ್ತು.

	ಇವನ ಹರ್ಷಾಂತ ನಾಟಕಗಳಲ್ಲಿ ಹಣದಿಂದ ಕಣ್ಣು ಕೋರೈಸಿಹೋದ ಸಮಾಜದ ಚಿತ್ರಣವಿದೆ. ಆ ಮುಸುಕಿನಲ್ಲಿ ತಮಗೆ ಏನು ಸಿಗುತ್ತದೆ ಎಂದು ಹುಡುಕುವವರೇ ಬಹಳ; ಹೇಗೆ ಸಿಗುತ್ತದೆ ಎಂದು ಅವರು ಯೋಚಿಸುವುದಿಲ್ಲ. ಇವನ ವ್ಯಂಗ್ಯ ಸಮೃದ್ಧಿಯ ನಾಟಕಗಳಲ್ಲಿ ಮೈಕೆಲ್‍ಮಸ್ ಟರ್ಮ್ ವಿಶಿಷ್ಟವಾದುದು. ಲಂಡನ್ನಿನ ಕುಟಿಲ ವ್ಯಾಪಾರಿ ಕ್ವೊಮೊಡೂ ಎಂಬಾತ ಒಬ್ಬ ತರುಣ ಸಂಭಾವಿತನನ್ನು ಬಲೆಗೆ ಸಿಕ್ಕಿಸಿಕೊಂಡು ಅವನ ತೋಟವನ್ನು ಕಬಳಿಸುವ ಕಲೆಯಲ್ಲಿ ಆನಂದಪಡುವಂಥ ವ್ಯಕ್ತಿ. ಮುಂದೆ ಇಂಥ ಸಂಚನ್ನು ಮತ್ತೆ ಮತ್ತೆ ಹೂಡಿ ಕೊನೆಗೆ ತಾನೇ ಅದಕ್ಕೆ ಬಲಿಯಾಗುತ್ತಾನೆ. 'ಎ ಟ್ರಿಕ್ ಟು ಕ್ಯಾಚ್ ದಿ ಓಲ್ಡ್ ಒನ್ ಎಂಬ ನಾಟಕದಲ್ಲಿ ದುಬಾರಿ ಬಡ್ಡಿಯನ್ನು ಹೇರಿ ಹಣದೋಚುವ ಇಬ್ಬರು ಧನಿಕ ಪ್ರತಿಸ್ಪರ್ಧಿಗಳು ಒಬ್ಬರನ್ನೊಬ್ಬರು ಮೀರಿಸುವ ಮೇಲಾಟದಲ್ಲೇ ಮುಳುಗಿರುತ್ತಾರೆ. ಕೊನೆಗೆ ಅವರಿಬ್ಬರನ್ನೂ ಜಾಣನೊಬ್ಬ ಮರುಳುಗೊಳಿಸಿ ಬಿಡುತ್ತಾನೆ. ಎ ಚೇಸ್ಟ್ ಮೇಡ್ ಇನ್ ಚೀಪ್‍ಸ್ಯಡ್ ಎಂಬುದು ಸರಳ ಸಮತುಷ್ಟ ಲಂಡನ್ ಪೌರರನ್ನು ತಮಾಷೆ ಮಾಡುವ ಹರ್ಷಸಮೃದ್ಧ ನಾಟಕ. ದಿ ರೋರಿಂಗ್ ಗರ್ಲ್ ಆರ್ ಮೋಲ್ ಕಟ್‍ಪರ್ಸ್ ಎಂಬ ನಾಟಕದ ಗಂಡುಬೀರಿ ಪಾತ್ರ ತುಂಬ ವಿಶಿಷ್ಟವಾದುದು. ಮದುವೆಗಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಬಯಸುವ ಪುರುಷ ವೇಷದ ಕಿಸೆಗಳ್ಳಿಯ ಪಾತ್ರವನ್ನು ಇದರಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.

	ಎ ಮ್ಯಾಡ್ ವಲ್ರ್ಡ್ ಮೈಮಾಸ್ಟರ್ಸ್, ದಿ ವಿಚ್, ದಿ ಸ್ಪ್ಯಾನಿಷ್ ಜಿಪ್ಸಿ, ಹೆಂಜೆಸ್ಟ್, ದಿ ಕಿಂಗ್ ಆಫ್ ಲವ್, ದಿ ವಲ್ರ್ಡ್ ಟಾಸ್ಡ್ ಆಟ್ ಟೆನ್ನಿಸ್, ದಿ ಫೀನಿಕ್ಸ್, ಯುವರ್ ಫೈವಾ ಗ್ಯಾಲೆಂಟ ಮೋರ್ ಡಿಸೆಂಬ್ಲಸ್ ಬಿಸೈಡ್ಸ್ ವುಮೆನ್, ದಿ ವಿಂಡೊ, ಎನಿಥಿಂಗ್ ಫಾರ್ ಎ ಕ್ವಯಟ್ ಲೈಫ್-ಇವು ಇವನ ಇತರ ಕೆಲವು ನಾಟಕಗಳು.

	ಇವನ ವರ್ಣಕಗಳು (ಪೇಜಂಟ್ಸ್) ಮತ್ತು ಮುಖವಾಡ ನಾಟಕಗಳಲ್ಲಿ ಕೆಲವನ್ನು ಹೀಗೆ ಹೆಸರಿಸಬಹುದು. ದಿ ಟ್ರಯಂಫ್ಸ್ ಆಫ್ ಟ್ರೂತ್ (1613), ದಿ ಟ್ರಯಂಫ್ಸ್ ಆಫ್ ಆನರ್ ಅಂಡ್ ಇಂಡಸ್ಟ್ರಿ (1617), ದಿ ಇನ್ನರ್ ಟೆಂಪಲ್ ಮಾಸ್ಕ್ (1619), ಸಿವಿಟಾಟಿಸ್ ಅಮೋರ್ (1616), ದಿ ಟ್ರಯಂಫ್ಸ್ ಆಫ್ ಲವ್ ಅಂಡ್ ಆಂತಿಕ್ವಿಟಿ (1619), ದಿ ಟ್ರಯಂಫ್ಸ್ ಆಫ್ ಆನರ್ ಅಂಡ್‍ವಚ್ರ್ಯು (1622), ದಿ ಟ್ರಯಂಫ್ಸ್ ಆಫ್ ಇಂಟೆಗ್ರಿಟಿ (16223). ದಿ ಟ್ರಯಂಫ್ಸ್ ಆಫ್ ಹೆಲ್ತ್ ಅಂಡ್ ಪ್ರಾಸ್ಪರಿಟಿ (1626).

	ತಾಮಸ್‍ಗೆ ಅಂದಿನ ಕಾಲದ ಜನಜೀವನದ ಪರಿಚಯ ನಿಕಟವಾಗಿತ್ತು ಎಂಬುದಕ್ಕೆ ಇವನ ಕಿರುಹೊತ್ತಿಗೆಗಳೇ ಸಾಕ್ಷಿ ತಲೆಹಿಡುಕರು, ಹಿಂಸಕರು, ವಿಷಯಲಂಪಟರು, ಸ್ವೇಚ್ಛಾಚಾರಿಗಳು. ಕಳ್ಳರು ಮೊದಲಾದವರ ಜೀವನ. ಹವ್ಯಾಸಗಳ ಸ್ಪಷ್ಟ ಅರಿವು ಇವನಿಗೆ ಇರುವುದು ಅವುಗಳಿಂದ ವ್ಯಕ್ತವಾಗುತ್ತದೆ. ಬ್ಲ್ಯಾಕ್ ಬುಕ್ (1604) ಮತ್ತು ಫಾದರ್ ಹಬ್ಬಡ್ರ್ಸ್ ಟೇಲ್ಸ್ (1604) ಎಂಬ ಎರಡು ವಿಡಂಬನೆಗಳು ಸೇರಿದಂತೆ ಅನೇಕ ಕಿರುಹೊತ್ತಿಗೆಗಳಲ್ಲಿ ಇವನ ಗದ್ಯ ಶೈಲಿಯ ಸತ್ವವನ್ನು ಕಾಣಬಹುದು.

	ಎ ಗೇಮ್ ಅಟ್ ಚೆಸ್ (1624) ರಂಗಭೂಮಿಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಯೋಗವಾದ ಇವನ ರಾಜಕೀಯ ವಿಡಂಬನ ನಾಟಕ. ಈ ನಾಟಕದ ವಿಡಂಬನೆಗಾಗಿ ಇವನೂ ನಾಟಕ ಅಭಿನಯಿಸಿದ ನಟರೂ ನ್ಯಾಯಮಂಡಲದ ಮುಂದೆ ಹಾಜರಾಗಬೇಕಾಯಿತು. ಇದರಲ್ಲಿ ಸ್ಪೇನ್ ಮತ್ತು ರೋಮನ್ ಕ್ಯಾಥೊಲಿಕ್ ಕ್ರೈಸ್ತಮಂಡಲಿಯ ಸದಸ್ಯರನ್ನು ಪ್ರತಿನಿಧಿಸುವ ಕಪ್ಪುರಾಜ ಮತ್ತು ಅವನ ಪರಿವಾರದವರನ್ನು ಬಿಳಿಯ ವೀರನಾದ ಚಾಲ್ರ್ಸ್ ರಾಜಕುಮಾರ ತಲೆ ಎತ್ತದಂತೆ ಸೋಲಿಸುವ ವಸ್ತುವಿದೆ. ಸ್ಪೇನ್ ರಾಯಭಾರಿಯಿಂದ ಪ್ರತಿಭಟನೆ ಬರುವವರೆಗೂ ಈ ನಾಟಕ ಅಪಾರ ಜನಪ್ರಿಯತೆಗಳಿಸಿ ಪ್ರದರ್ಶನಗೊಂಡಿತ್ತು. ಕಿಂಗ್ ಜೇಮ್ಸ್ ಈ ನಾಟಕವನ್ನು ನಿಷೇಧಿಸಿದ. ಈ ಘಟನೆಯ ಅನಂತರ ತಾಮಸ್‍ನ ರಂಗಭೂಮಿಯ ಚಟುವಟಿಕೆ ಸ್ಥಗಿತಗೊಂಡಿತು.

	ಈತ ಸರ್ರೆಯ ನೇವಿಂಗ್‍ಟನ್‍ಬಟ್ಸ್‍ನಲ್ಲಿ ನೆಲೆಸಿದ್ದ. ಸು. 1604ಕ್ಕೂ ಮುಂಚೆಯೇ ವಿವಾಹವಾಗಿದ್ದ. ಮಾರಿಯ ಮಾರ್‍ಬಕ್ ಎಂಬವಳು ಇದನ ಹೆಂಡತಿ. ಇವರಿಗೆ ಎಡ್ವರ್ಡ್ ಎಂಬ ಒಬ್ಬ ಮಗನಿದ್ದ. ತಾಮಸ್ 4 ಜುಲೈ 1627ರಂದು ನಿಧನಹೊಂದಿದ. ಇವನ ಅನೇಕ ನಾಟಕಗಳು ಇವನ ನಿಧನಾ ನಂತರ ಪ್ರದರ್ಶನಗೊಂಡವು. ಇವನ ಕೃತಿಗಳನ್ನು ಡೈಸ್ 1840ರಲ್ಲೂ ಎ. ಎಚ್. ಬುಲೆನ್ 1885-86ರಲ್ಲೂ ಸಂಗ್ರಹಿಸಿದರು.						

	(ಬಿ.ಎಸ್.ಪಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ